Tvkತುರುವೇಕೆರೆ: ಸದಸ್ಯರ ಗಮನಕ್ಕೆ ತರದೆ ನೀವೇ ತೀರ್ಮಾನ ಕೈಗೊಳ್ಳುವುದಾದರೆ ಪಟ್ಟಣ ಪಂಚಾಯ್ತಿ ಆಡಳಿತ ಮಂಡಳಿ ಏಕೆ? ಸದಸ್ಯರಾದ ನಾವೇಕೆ? ಎಂದು ಪಟ್ಟಣ ಪಂಚಾಯ್ತಿ ಅಧಿಕಾರಿಗಳನ್ನು ಸದಸ್ಯರಾದ ವಿಜಯಕುಮಾರ್, ನವ್ಯ ಪ್ರಕಾಶ್, ನದೀಮ್ ಅಹಮದ್, ತಬಸುಮ್ ಸುಲ್ತಾನ ತರಾಟೆಗೆ ತೆಗೆದುಕೊಂಡರು.

ಪಟ್ಟಣ ಪಂಚಾಯ್ತಿ ಅಧ್ಯಕ್ಷ ಲಕ್ಷ್ಮೀನರಸಿಂಹ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಘನತ್ಯಾಜ್ಯ ವಸ್ತು ವಿಲೇವಾರಿಯನ್ನು ಸಮರ್ಪಕವಾಗಿ ನಿರ್ವಹಿಸಲು ಮೂಲದಲ್ಲೇ ಕಸ ಬೇರ್ಪಡಿಸುವ ಮತ್ತು ಕಸ ಸಂಗ್ರಹಣೆಯ ಕಾರ್ಯವನ್ನು ಪೂರ್ಣವಾಗಿ ಅನುಷ್ಠಾನಗೊಳಿಸಲು ಸಾಧನ ಸಲಕರಣೆಗಳನ್ನು ಖರೀದಿಸುವ ವಿಚಾರಕ್ಕೆ ಸಂಬಂಧಿಸಿದ ಚರ್ಚೆಯಲ್ಲಿ ಸದಸ್ಯರು ಅಧಿಕಾರಿಗಳ ಕ್ರಮದ ವಿರುದ್ಧ ಕಿಡಿಕಾರಿದರು.

ಈಗಾಗಲೇ ಸಾಧನ ಸಲಕರಣೆಗಳನ್ನು ಖರೀದಿಸಿ, ಖರೀದಿಸುವ ಬಗ್ಗೆ ಎಂದು ಸಭೆಯಲ್ಲಿ ಚರ್ಚೆಗೆ ತಂದಿರುವುದು ಎಷ್ಟು ಸರಿ ಎಂದು ನವ್ಯಪ್ರಕಾಶ್ ಪ್ರಶ್ನಿಸಿದರೆ, ಲಕ್ಷ ರೂಗೂ ಅಧಿಕ ಮೊತ್ತದ ವಿಚಾರವನ್ನು ಸದಸ್ಯರ ಗಮನಕ್ಕೆ ತರದೆ ನೀವೇ ನಿರ್ಧರಿಸಿ ಸಾಧನ ಸಲಕರಣೆ ತಂದಿದ್ದೀರಿ. ಖರೀದಿಸಲು ನಿಮಗೆ ಹೇಳಿದವರು ಯಾರು? ಕ್ರಿಯಾ ಯೋಜನೆ ರೂಪಿಸಿದವರಾರು? ಮಾನದಂಡ ಏನಿದೆ? ಟೆಂಡರ್ ಪ್ರಕ್ರಿಯೆ ನಡೆದಿದೆಯೇ? ಉತ್ತರಿಸಿ ಎಂದು ಸದಸ್ಯ ವಿಜಯಕುಮಾರ್ ಪ್ರಶ್ನೆಗಳ ಸುರಿಮಳೆಗೈದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯ ನದೀಮ್ ಅಹಮದ್ ಸಾಧನ ಸಲಕರಣೆ ಖರೀದಿ ಸದಸ್ಯರ ಗಮನಕ್ಕೆ ಬಾರದಿರುವುದರಿಂದ ಖರೀದಿಸಿರುವ ಸಾಧನ ಸಲಕರಣೆಗಳಿಗೆ ಬಿಲ್ ನೀಡಕೂಡದು ಎಂದರು.

Tvkಈ ಬಗ್ಗೆ ಮುಖ್ಯಾಧಿಕಾರಿ ಮಂಜುಳಾದೇವಿ ಸ್ವಚ್ಛ ಭಾರತ್ ಯೋಜನೆಗೆ ಸಂಬಂಧಿಸಿದಂತೆ ಪಟ್ಟಣ ಪಂಚಾಯ್ತಿಗೆ ಹೆಚ್ಚಿನ ಅಂಕಗಳನ್ನು ಪಡೆದು ಅನುದಾನ ಲಭ್ಯತೆಯಲ್ಲಿ ಪ್ರಾಶಸ್ತ್ಯ ಪಡೆಯುವ ಸರ್ಕಾರದ ವಿಚಾರವನ್ನು ಸಭೆಗೆ ತಿಳಿಸಿ, ಈ ಕಾರಣಕ್ಕಾಗಿ ಅಕ್ಟೋಬರ್ ಅಂತ್ಯದೊಳಗೆ ಅಂಕ ಪಡೆದು ಸರ್ಕಾರಕ್ಕೆ ವರದಿ ಕಳುಹಿಸಬೇಕಾದ್ದರಿಂದ ಹೀಗೆ ಮಾಡಬೇಕಾಯಿತು ಎಂದರು.

ಸರ್ಕಾರದ ನಿಯಮಗಳ ಬಗ್ಗೆ ತಿಳಿಸಿ, ಮೊದಲೇ ಸಭೆ ಕರೆದು ಸಭೆಯಲ್ಲಿ ವಿಚಾರ ಚರ್ಚೆಗೆ ತರಬೇಕಿತ್ತು. ಎಲ್ಲದಕ್ಕೂ ಕಾನೂನು ಮಾತನಾಡುವ ನೀವು, ಈ ವಿಚಾರದಲ್ಲಿ ಕಾನೂನು ಇಲ್ಲವೇ? ಸರ್ಕಾರ ಸದಸ್ಯರ ಗಮನಕ್ಕೆ ತರದೆ ಸಾಮಾನು ಖರೀದಿಸಿ ಎಂದು ಹೇಳಿದೆಯೇ? ಕನಿಷ್ಠ ಪೌರ ಕಾರ್ಮಿಕರ ಸಂಬಳ ನೀಡಲಾಗದ ನೀವು ಇನ್ನೇನು ಪಟ್ಟಣ ಸ್ವಚ್ಛತೆ ಮಾಡುತ್ತೀರಿ. ಇದೇನು ಮನೆ ಹಣವೇ ಬೇಕಾಬಿಟ್ಟಿ ನಿಮ್ಮಿಷ್ಟದಂತೆ ಮಾಡಲು, ಸಾರ್ವಜನಿಕರ ಹಣ ಸಭೆಯಲ್ಲಿ ಚರ್ಚೆಗೆ ತಂದು ಚರ್ಚಿಸಿ ನಂತರ ಕಾರ್ಯೋನ್ಮುಖವಾಗಬೇಕು ಎಂದು ಸದಸ್ಯ ವಿಜಯಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಈ ಮಧ್ಯೆ ಸಾಧನ ಸಲಕರಣೆ ಖರೀದಿಯ ಕೊಟೇಷನ್ ತರುವಂತೆ ಸದಸ್ಯರು ಕೇಳಿದಾಗ ಕೊಟೇಷನ್ ಪ್ರತಿ ಇದ್ದ ಆರೋಗ್ಯ ನಿರೀಕ್ಷಕರ ಕೊಠಡಿಗೆ ಪೌರನೌಕರ ಬೀಗ ಹಾಕಿಕೊಂಡು ಹೋಗಿದ್ದಾನೆಂದು ತಿಳಿದುಬಂದಿತು. ಒಬ್ಬ ಪೌರನೌಕರ ಆರೋಗ್ಯ ನಿರೀಕ್ಷಕರ ಕೊಠಡಿ ಬೀಗ ಹಾಕಿ ಕೀ ತೆಗೆದುಕೊಂಡು ಹೋಗುತ್ತಾನೆಂದರೆ ಪಟ್ಟಣ ಪಂಚಾಯ್ತಿ ಯಾವ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕೆಂದು ವ್ಯಂಗ್ಯ ಮಾಡಿದರು.

ಸಿಬ್ಬಂದಿ, ಪೌರಕಾರ್ಮಿಕರಿಗೆ ಸಂಬಳ ನೀಡುವಂತೆ ಸದಸ್ಯ ಮಹೇಶ್ ಆಗ್ರಹ

ಪೌರ ಕಾರ್ಮಿಕರಿಗೆ ವೇತನ ನೀಡದೆ ಕಾರ್ಮಿಕರ ಕುಟುಂಬ ಸಂಕಷ್ಟಕ್ಕೀಡಾಗಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಪಪಂ ಸದಸ್ಯ ಯಜಮಾನ್ ಮಹೇಶ್, ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಗುತ್ತಿಗೆದಾರ ೨ ತಿಂಗಳಿಂದ ವೇತನ ನೀಡಿಲ್ಲ. ಈ ಬಗ್ಗೆ ಗುತ್ತಿಗೆದಾರರಿಗೆ ನೊಟೀಸ್ ನೀಡಿ ಕೂಡಲೇ ಪೌರಕಾರ್ಮಿಕರಿಗೆ ಸಂಬಳ ನೀಡುವಂತೆ ಸೂಚಿಸಬೇಕೆಂದ ಅವರು, ಪಪಂನಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ೬ ತಿಂಗಳಿಂದ, ವಾಟರ್‌ಮ್ಯಾನ್‌ಗಳಿಗೆ ೦೫ ತಿಂಗಳಿಂದ ಸಂಬಳ ನೀಡಿಲ್ಲ. ಪಪಂ ಸಿಬ್ಬಂದಿ ಹಾಗೂ ನೌಕರರು ತಿಂಗಳುಗಟ್ಟಲೆ ವೇತನವಿಲ್ಲದೆ ಜೀವನ ಸಾಗಿಸಲು ಸಂಕಷ್ಟಪಡುತ್ತಿದ್ದಾರೆ. ಕೂಡಲೇ ಸಂಬಳ ನೀಡಬೇಕೆಂದು ಆಗ್ರಹಿಸಿದರು.

ಸಕ್ಕಿಂಗ್ ಯಂತ್ರದ ವ್ಯವಸ್ಥೆ ಮಾಡಿ

ತುರುವೇಕೆರೆ ಪಟ್ಟಣ ಪಂಚಾಯ್ತಿಯಲ್ಲಿ ಒಂದು ಸಕ್ಕಿಂಗ್ ಯಂತ್ರ ತರುವುದಕ್ಕೆ ಆಗಿಲ್ಲ, ಇದ್ದ ಸಕ್ಕಿಂಗ್ ಯಂತ್ರವನ್ನೂ ಸರಿಪಡಿಸಲಾಗಲಿಲ್ಲ. ಸಾರ್ವಜನಿಕರು ಸಕ್ಕಿಂಗ್ ಯಂತ್ರಕ್ಕಾಗಿ ಪಕ್ಕದ ತಾಲ್ಲೂಕುಗಳ ಮೊರೆ ಹೋಗುವಂತಾಗಿದೆ. ಕೂಡಲೇ ಸಕ್ಕಿಂಗ್ ಯಂತ್ರದ ವ್ಯವಸ್ಥೆ ಮಾಡಿ, ಸಾರ್ವಜನಿಕರಿಗೆ ಉತ್ತರಿಸಲು ಆಗುತ್ತಿಲ್ಲ ಎಂದು ಪಪಂ ಸದಸ್ಯ ಕೆ.ಟಿ.ಶಿವಶಂಕರ್ ಕಿಡಿಕಾರಿದರು.

ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆ

ತುರುವೇಕೆರೆ ಪಟ್ಟಣ ಪಂಚಾಯ್ತಿಗೆ ಸೇರಿದ ೨೧ ಅಂಗಡಿ ಮಳಿಗೆಗಳಿಗೆ ಟೆಂಡರ್ ಕರೆಯಲಾಗಿತ್ತು. ಅದರಲ್ಲಿ ಮೂರು ಅಂಗಡಿಗಳಿಗೆ ಏಕಮೇವ ಟೆಂಡರ್ ಸಲ್ಲಿಕೆಯಾಗಿದೆ. ಉಳಿದ ೧೮ ಮಳಿಗೆಗಳಿಗೆ ಮರುಟೆಂಡರ್ ಕರೆಯಬೇಕಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು. ಈ ಬಗ್ಗೆ ಮಾತನಾಡಿದ ಪಪಂ ಸದಸ್ಯ ಟಿ.ಎನ್.ಶಶಿಶೇಖರ್ ಹಾಗೂ ಇತರೆ ಸದಸ್ಯರು ಏಕಮೇವ ಟೆಂಡರ್ ಸಲ್ಲಿಸಿರುವವರು ೩ ಮಳಿಗೆಗಳಿಗೆ ಉತ್ತಮ ಬಾಡಿಗೆ ಕೊಡಲು ಒಪ್ಪಿರುವ ಕಾರಣ ಅವರಿಗೆ ಅಂಗಡಿ ಮಳಿಗೆ ನೀಡಿ ಪ್ರಕ್ರಿಯೆ ಕೈಗೊಳ್ಳಿ. ಉಳಿದ ೧೮ ಅಂಗಡಿ ಮಳಿಗೆಗೆ ಇ-ಪ್ರಕ್ಯೂರ್‌ಮೆಂಟ್ ಹಾಗೂ ಮ್ಯಾನ್ಯುಯೆಲ್ ಟೆಂಡರ್ ಮೂಲಕ ಮರು ಟೆಂಡರ್ ಕರೆಯಿರಿ. ಟೆಂಡರ್ ಪ್ರಕ್ರಿಯೆ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು ಕರಪತ್ರ ಹೊರಡಿಸಿ ಹಾಗೂ ಟೆಂಡರ್ ಮೂಲಕ ಅಂಗಡಿ ಪಡೆದವರೇ ಅಂಗಡಿ ನಡೆಸಬೇಕು, ಬೇರೆಯವರಿಗೆ ಹಸ್ತಾಂತರಕ್ಕೆ ಅವಕಾಶವಿಲ್ಲ ಎಂಬ ಷರತ್ತಿನ ಮೇಲೆ ಟೆಂಡರ್ ಪ್ರಕ್ರಿಯೆ ನಡೆಸುವಂತೆ ತಿಳಿಸಿದರು.

ಕೋಳಿ ಕಸ ವಿಲೇವಾರಿಗೆ ದರ ನಿಗದಿಪಡಿಸಿ: ಸದಸ್ಯರ ಒತ್ತಾಯ

ತುರುವೇಕೆರೆ ಪಟ್ಟಣದಲ್ಲಿ ಸುಮಾರು ೩೫ಕ್ಕೂ ಅಧಿಕ ಕೋಳಿ ಅಂಗಡಿಗಳಿದೆ. ಕೋಳಿ ಕಸವನ್ನು ಪಟ್ಟಣ ಪಂಚಾಯ್ತಿ ಪೌರಕಾರ್ಮಿಕರೇ ವಿಲೇವಾರಿ ಮಾಡುತ್ತಿದ್ದಾರೆ. ಕೋಳಿ ಅಂಗಡಿಯವರು ಯಾವುದೇ ಸುಂಕ ನೀಡುತ್ತಿಲ್ಲ. ಕಸ ವಿಲೇವಾರಿಯನ್ನು ಉಚಿತವಾಗಿ ಪೌರಕಾರ್ಮಿಕರು ಮಾಡುವುದೇಕೆ? ಕೋಳಿಕಸ ವಿಲೇವಾರಿಗೆ ಅಂಗಡಿಯೊಂದಕ್ಕೆ ತಿಂಗಳಿಗೆ ಒಂದು ಸಾವಿರ ರೂನಂತೆ ನಿಗದಿ ಮಾಡಿ, ಆಗ ಪಟ್ಟಣ ಪಂಚಾಯ್ತಿಗೂ ಆದಾಯ ಬರುತ್ತದೆ ಎಂದು ಸದಸ್ಯರು ಒತ್ತಾಯಿಸಿದರು.

ಪಟ್ಟಣ ಪಂಚಾಯ್ತಿ ಎದುರಿರುವ ಪೆಟ್ರೋಲ್ ಬಂಕ್ ಪಕ್ಕದ ಪಪಂ ಜಾಗದಲ್ಲಿ ಕೋಳಿ ಅಂಗಡಿ ಇಟ್ಟುಕೊಳ್ಳಲು ಅವಕಾಶ ನೀಡಿ ದಶಕಗಳೇ ಕಳೆದಿದೆ. ಇದುವರೆವಿಗೆ ಬಾಡಿಗೆಯನ್ನು ಹೆಚ್ಚಳ ಮಾಡಿಲ್ಲ, ಸ್ಥಳವನ್ನು ಮತ್ತೆ ಹರಾಜು ನಡೆಸಿ ಪಪಂಗೆ ಆದಾಯ ಬರುವಂತೆಯೂ ಮಾಡದೆ ತಟಸ್ಥ ನೀತಿ ಅನುಸರಿಸಿರುವ ಬಗ್ಗೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಸ್ಥಳವನ್ನು ಮರುಹರಾಜು ಮಾಡಿ ಪಪಂಗೆ ಆದಾಯ ಬರುವಂತೆ ಮಾಡುವಂತೆ ಆಗ್ರಹಿಸಿದರು.

ಘನತ್ಯಾಜ್ಯ ವಸ್ತು ವಿಲೇವಾರಿಯನ್ನು ಸಮರ್ಪಕವಾಗಿ ನಿರ್ವಹಿಸಲು ಮೂಲದಲ್ಲೇ ಕಸ ಬೇರ್ಪಡಿಸುವ ಮತ್ತು ಕಸ ಸಂಗ್ರಹಣೆಯ ಕಾರ್ಯವನ್ನು ಪೂರ್ಣವಾಗಿ ಅನುಷ್ಠಾನಗೊಳಿಸಲು ಸಾಧನ ಸಲಕರಣೆಗಳನ್ನು ಖರೀದಿ ಹಾಗೂ ಸಾಂಕ್ರಾಮಿಕ ರೋಗಗಳ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಶಾಖೆಗೆ ಸೊಳ್ಳೆಗಳ ನಿರ್ಮೂಲನೆಗೆ ಕ್ರಿಮಿನಾಶಕ ಸಿಂಪಡಿಸಲು ಮೊಬೈಲ್ ಪವರ್ ಸ್ಪ್ರೆಯರ್ ಖರೀದಿ ವಿಚಾರವನ್ನು ಮುಂದಿನ ಸಭೆಗೆ ತರಬೇಕೆಂದು ಸದಸ್ಯರು ಸೂಚಿಸಿದರು.

ಪಪಂ ಸದಸ್ಯರಾದ ಟಿ.ವಿ.ಶ್ರೀನಿವಾಸಮೂರ್ತಿ, ನೇತ್ರಾವತಿರಂಗಸ್ವಾಮಿ, ರುದ್ರೇಶ್, ಕೃಷ್ಣಮೂರ್ತಿ, ಮನುಕುಮಾರ್, ದೊರೈ, ಮುಖ್ಯಾಧಿಕಾರಿ ಮಂಜುಳಾದೇವಿ, ಇಂಜಿನಿಯರ್ ಸತ್ಯನಾರಾಯಣ, ಅಧಿಕಾರಿಗಳಾದ ದೇವರಾಜ್, ರಂಗನಾಥ್, ಸದಾನಂದ್, ನರೇಂದ್ರ, ಆರೋಗ್ಯ ನಿರೀಕ್ಷಕಿ ಅಪ್ಸಿಯಾ ಮುಂತಾದವರಿದ್ದರು.

ವರದಿ: ಗಿರೀಶ್ ಕೆ ಭಟ್, ತುರುವೇಕೆರೆ

Please follow and like us:
0
https://kannadadalli.com/wp-content/uploads/2018/10/IMG-20181026-WA0017-1024x400.jpghttps://kannadadalli.com/wp-content/uploads/2018/10/IMG-20181026-WA0017-150x100.jpgKannadadalli Editorಸುದ್ದಿತುರುವೇಕೆರೆ: ಸದಸ್ಯರ ಗಮನಕ್ಕೆ ತರದೆ ನೀವೇ ತೀರ್ಮಾನ ಕೈಗೊಳ್ಳುವುದಾದರೆ ಪಟ್ಟಣ ಪಂಚಾಯ್ತಿ ಆಡಳಿತ ಮಂಡಳಿ ಏಕೆ? ಸದಸ್ಯರಾದ ನಾವೇಕೆ? ಎಂದು ಪಟ್ಟಣ ಪಂಚಾಯ್ತಿ ಅಧಿಕಾರಿಗಳನ್ನು ಸದಸ್ಯರಾದ ವಿಜಯಕುಮಾರ್, ನವ್ಯ ಪ್ರಕಾಶ್, ನದೀಮ್ ಅಹಮದ್, ತಬಸುಮ್ ಸುಲ್ತಾನ ತರಾಟೆಗೆ ತೆಗೆದುಕೊಂಡರು. ಪಟ್ಟಣ ಪಂಚಾಯ್ತಿ ಅಧ್ಯಕ್ಷ ಲಕ್ಷ್ಮೀನರಸಿಂಹ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಘನತ್ಯಾಜ್ಯ ವಸ್ತು ವಿಲೇವಾರಿಯನ್ನು ಸಮರ್ಪಕವಾಗಿ ನಿರ್ವಹಿಸಲು ಮೂಲದಲ್ಲೇ ಕಸ ಬೇರ್ಪಡಿಸುವ ಮತ್ತು ಕಸ ಸಂಗ್ರಹಣೆಯ ಕಾರ್ಯವನ್ನು ಪೂರ್ಣವಾಗಿ...ಕನ್ನಡಿಗರ ವೆಬ್​ ಚಾನೆಲ್​