ತುರುವೇಕೆರೆ: ತಾಲ್ಲೂಕು ಕೇಂದ್ರವಾದ ತುರುವೇಕೆರೆ ಪಟ್ಟಣದಲ್ಲಿ ಎಲ್ಲಾ ರೀತಿಯ ಸೌಕರ್ಯಗಳಿದ್ದರೂ ಸಹ ಸಂಚಾರ ವ್ಯವಸ್ಥೆ ಮಾತ್ರ ಇನ್ನಿಲ್ಲದಂತೆ ಹದಗೆಟ್ಟಿದೆ. ಪಟ್ಟಣದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ವಾಹನಗಳಿಂದ ಪಾದಚಾರಿಗಳು, ವಾಹನ ಸಂಚಾರರು ಜೀವಭಯದಿಂದ ಪಟ್ಟಣದಲ್ಲಿ ಸಂಚರಿಸುವಂತಾಗಿದೆ. ಸಂಚಾರ ವ್ಯವಸ್ಥೆಯಲ್ಲಿ ಕಾನೂನು ಭಾರಿ ಪ್ರಮಾಣದಲ್ಲಿ ಉಲ್ಲಂಘನೆಯಾಗುತ್ತಿದ್ದರೂ ಕೇಳುವವರಿಲ್ಲದಂತಾಗಿದೆ. ವರ್ತಕರ ಸ್ವಹಿತಾಸಕ್ತಿ, ಜನಪ್ರತಿನಿಧಿಗ, ಅಧಿಕಾರಿಗಳ ನಿರಾಸಕ್ತಿ, ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳ ನಡುವೆ ಪಟ್ಟಣದ ಜನತೆಯ ಜೀವಕ್ಕೆ ರಕ್ಷಣೆಯಿಲ್ಲದಂತಾಗಿದೆ.

ಪಟ್ಟಣದ ಜನನಿಬಿಡ ರಸ್ತೆಯಾದ ದಬ್ಬೇಘಟ್ಟ ರಸ್ತೆ ಅಗಲೀಕರಣ ಹಾಗೂ ಅಭಿವೃದ್ದಿಗೆ ಸರ್ಕಾರದಿಂದ ಐದೂವರೆ ಕೋಟಿರೂ ಮಂಜೂರಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ 50 ಅಡಿ ಅಗಲೀಕರಣ ಮಾಡಿ ಅಭಿವೃದ್ದಿಪಡಿಸಬೇಕೆನ್ನುವ ರೂಪುರೇಷೆಯೂ ಸಿದ್ದವಾಗಿದೆ. ಶಾಸಕ ಎ.ಎಸ್.ಜಯರಾಮ್ ಅವರು ದಬ್ಬೇಘಟ್ಟ ರಸ್ತೆ ಅಗಲೀಕರಣ ಕಾರ್ಯಕ್ಕೆ ಮತ್ತೆ ಚಾಲನೆ ನೀಡಿದ್ದಾರೆ. ಇದಕ್ಕೆ ಪೂರಕವೆಂಬಂತೆ ಪ್ರಾರಂಭಿಕ ಹಂತವಾಗಿ ಈಗಾಗಲೇ ರಸ್ತೆಯ ಇಕ್ಕೆಲಗಳಲ್ಲಿದ್ದ ಮರಗಳನ್ನು ಕಡಿಯಲಾಗಿದೆ. ವಿದ್ಯುತ್ ಕಂಬಗಳು ಸ್ಥಳಾಂತರಗೊಳ್ಳಬೇಕಿದೆ. ಆದರೆ ಮರಗಳನ್ನು ಕಡಿದ ನಂತರ ಯಾವುದೇ ಕೆಲಸಗಳು ನಡೆಯದೆ ರಸ್ತೆ ಅಗಲೀಕರಣ ಕಾಮಗಾರಿ ಮತ್ತೆ ಸ್ಥಗಿತಗೊಂಡಿದೆ. ಯಾವ ಕಾರಣಕ್ಕೆ ಸ್ಥಗಿತಗೊಂಡಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ.
ರಸ್ತೆಯು ತಿಪಟೂರು ವೃತ್ತದಿಂದ ನ್ಯಾಯಾಲಯದವರೆಗೂ ಗುಂಡಿಗೊಟರುಗಳಿಂದ ತುಂಬಿ ತುಳುಕುತ್ತಿದೆ. ಸೋಮವಾರ ಸುರಿದ ಮಳೆಯಿಂದ ರಸ್ತೆಯಲ್ಲಿನ ಗುಂಡಿಗಳು ತುಂಬಿ ಮಿನಿಕೆರೆಗಳಂತಾಗಿ ಸಾರ್ವಜನಿಕರು, ವಾಹನ ಸವಾರರ ಪಾಡು ಹೇಳತೀರದಾಗಿತ್ತು. ರಸ್ತೆ ಇಂದು ಅಗಲೀಕರಣವಾಗುತ್ತದೆ, ನಾಳೆ ಆಗುತ್ತದೆ, ಸುಗಮ ಸಂಚಾರಕ್ಕೆ ರಸ್ತೆ ಮುಕ್ತವಾಗುತ್ತದೆ ಎಂದು ಕಾಯುತ್ತಿರುವ ಪಟ್ಟಣದ ನಾಗರೀಕರ ಅಳಲನ್ನು ಕೇಳುವ, ಸಮಸ್ಯೆ ಪರಿಹರಿಸುವ ನಾಯಕ, ಜನಪ್ರತಿನಿಧಿಗಳಿಗೆ ಇಲ್ಲವಾಗಿರುವುದು ಶೋಚನೀಯ ಸಂಗತಿಯಾಗಿದೆ. ರಸ್ತೆಯಲ್ಲಿ ಹೆಜ್ಜೆಗೊಂದರಂತೆ ಸಿಗುವ ಗುಂಡಿಗೊಟರುಗಳಿಂದ ವಾಹನ ಸವಾರರು ಬಿದ್ದು ಅನಾಹುತಗಳು ಸಂಭವಿಸುತ್ತಲೇ ಇದೆ. ಪ್ರಾಣಹಾನಿಯಾಗುವುದಕ್ಕೂ ಮೊದಲೇ ರಸ್ತೆ ಅಗಲೀಕರಣ ಮಾಡಿ ಅಭಿವೃದ್ದಿಪಡಿಸಿ ನಾಗರೀಕರ ಹಿಡಿಶಾಪದಿಂದ ಮುಕ್ತರಾಗಿ ಅವರ ವಿಶ್ವಾಸಗಳಿಸುವುದು ಜನಪ್ರತಿನಿಧಿಗಳ ಆದ್ಯ ಕರ್ತವ್ಯವಾಗಿದೆ.

ಪಟ್ಟಣದ ಅತಿ ಹೆಚ್ಚು ಜನನಿಬಿಡ ರಸ್ತೆಯಾದ ದಬ್ಬೇಘಟ್ಟ ರಸ್ತೆಯಲ್ಲಿ ಸರ್ಕಾರಿ ಕಛೇರಿಗಳು, ಶಾಲಾ ಕಾಲೇಜುಗಳು, ನ್ಯಾಯಾಲಯ, ಎಪಿಎಂಸಿ, ತೋಟಗಾರಿಕೆ, ಕೃಷಿ, ರೇಷ್ಮೆ, ಮೀನುಗಾರಿಕೆ, ಬೆಸ್ಕಾಂ, ಸಾರಿಗೆ ಡಿಪೋ, ಬ್ಯಾಂಕ್, ಖಾಸಗಿ ಆಸ್ಪತ್ರೆಗಳು, ವಾಣಿಜ್ಯ ಮಳಿಗೆಗಳು ಸಾಕಷ್ಟಿದೆ. ರಸ್ತೆ ಕಿರಿದಾಗಿದೆ. ವಾಹನ ಸಂಚಾರ, ಜನದಟ್ಟಣೆ ಅಧಿಕವಾಗಿದೆ. ಈ ರಸ್ತೆಯಲ್ಲಿ ಸಂಚರಿಸುವ ಶಾಲಾ ಮಕ್ಕಳು, ಮಹಿಳೆಯರು, ವಯೋವೃದ್ದರು, ಪಾದಚಾರಿಗಳು, ವಾಹನ ಸವಾರರಂತೂ ಜೀವ ಉಳಿಸಿ ಕೊಂಡು ಮನೆ ತಲುಪಿದರೆ ಮರುಜೀವ ಬಂತು ಎಂದು ನಿಟ್ಟುಸಿರು ಬಿಡುತ್ತಿದ್ದಾರೆ. ಪ್ರತಿ ಸೋಮವಾರ ನಡೆಯುವ ಸಂತೆಗೆ ಗ್ರಾಮೀಣ ಭಾಗದಿಂದ ಸಾವಿರಾರು ಮಂದಿ ತುರುವೇಕೆರೆಗೆ ಆಗಮಿಸುತ್ತಾರೆ. ಅಂದು ಜನದಟ್ಟಣೆ, ವಾಹನ ಸಂಚಾರ ಎಂದಿಗಿಂತ 10 ಪಟ್ಟು ಹೆಚ್ಚಾಗಿರುತ್ತದೆ. ಎಪಿಎಂಸಿ ಮಾರುಕಟ್ಟೆಗೆ ಕೊಬ್ಬರಿ ತರುವ ಟ್ರಾಕ್ಟರ್‌ಗಳು, ಸಾರಿಗೆ ಬಸ್, ಖಾಸಗಿ ವಾಹನಗಳು ಹೀಗೆ ಸಹಸ್ರಾರು ವಾಹನಗಳು ಒಂದೇ ದಿನ ಸಂಚರಿ ಸುತ್ತಿರುವಾಗ ಅಪಘಾತ ಯಾವಾಗ ಸಂಭವಿಸಿ ರಸ್ತೆಯ ಇಕ್ಕೆಲಗಳಲ್ಲಿ ಸಂಚರಿಸುವ ಪಾದ ಚಾರಿಗಳ ಜೀವ ಭಯದಿಂದ ನಡುಗುತ್ತಿರುತ್ತದೆ. ಕಿರಿದಾದ ರಸ್ತೆಗಳಲ್ಲಿ ಭಾರೀ ವಾಹನಗಳು ಮುಖಾ ಮುಖಿಯಾದಾಗ ಟ್ರಾಫಿಕ್ ಜಾಮ್ ಖಚಿತ. ಇಂತಹ ಪರಿಸ್ಥಿತಿಯಲ್ಲಿ ಸ್ವಲ್ಪ ಯಾಮಾರಿದರೂ ಶಾಶ್ವತ ಅಂಗವೈಕಲ್ಯಕ್ಕೆ ಜನತೆ ತುತ್ತಾಗುವ ಸಂಭವವೇ ಹೆಚ್ಚು.

ಕೆಲವು ವರ್ಷಗಳ ಹಿಂದೆ ದಬ್ಬೇಘಟ್ಟ ರಸ್ತೆ ಅಗಲೀಕರಣಕ್ಕೆ ಸರ್ಕಾರ ದಿಂದ 60ಲಕ್ಷ ರೂ ಬಿಡುಗಡೆಯಾಗಿತ್ತು. ರಸ್ತೆ ಅಗಲೀಕರಣ ಪ್ರಕ್ರಿಯೆಗೆ ಶಾಸಕ ಎಂ.ಟಿ.ಕೃಷ್ಣಪ್ಪ ಗುದ್ದಲಿ ಪೂಜೆ ನೆರವೇರಿಸಿದ್ದರು. ಆದರೆ ನಂತರದ ಬೆಳವಣಿಗೆಯಲ್ಲಿ ಜನಹಿತ ಮರೆತ ಪಟ್ಟಣ ಪಂಚಾಯ್ತಿ ಹಾಗೂ ಲೋಕೋಪಯೋಗಿ ಇಲಾಖಾ ಅಧಿಕಾರಿಗಳ ಬೇಜವಾಬ್ದಾರಿಯಿಂದ ರಸ್ತೆಯನ್ನು ಒಂದಿಂಚೂ ಅಗಲೀಕರಣವಾಗದೆ ಇದ್ದ ರಸ್ತೆಗೆ ಡಾಂಬರು ಹಾಕಿ ಕಾಮಗಾರಿ 60ಲಕ್ಷರೂಗಳನ್ನು ಮುಗಿಸಲಾಯಿತು. ನಂತರ ಸಂಸದ ಎಸ್.ಪಿ. ಮುದ್ದಹನುಮೇಗೌಡರು ಹೊಸ ಅನುದಾನ ತಂದು ದಬ್ಬೇಘಟ್ಟ ರಸ್ತೆ ಅಗಲೀಕರಣ ಕಾರ್ಯಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು. ಈ ಕಾರ್ಯ ಕಡೇಹಳ್ಳಿ, ಮಾವಿನಕೆರೆ, ಮಾಯಸಂದ್ರ ಮಾರ್ಗ ಆಗಬೇಕಿತ್ತು. ಅದೂ ಸಹ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಪ್ರಾರಂಭವೇ ಆಗಿಲ್ಲ.

ಈ ಸಂಬಂಧ ದಬ್ಬೇಘಟ್ಟ ರಸ್ತೆಯನ್ನು ರಸ್ತೆಯ ಇಕ್ಕೆಲಗಳಲ್ಲಿ ತಲಾ ೫೦ ಅಡಿ ಅಗಲೀಕರಗೊಳಿಸಿ ಅಭಿವೃದ್ದಿ ಮಾಡಬೇಕೆಂದು ನಾಗರೀಕರ ಪರವಾಗಿ ದಬ್ಬೇಘಟ್ಟ ರಸ್ತೆ ಅಭಿವೃದ್ದಿ ಹೋರಾಟ ಸಮಿತಿ ನಿರಂತರ ಹೋರಾಟ ನಡೆಸುತ್ತಲೇ ಬಂದಿದೆ. ದಬ್ಬೇಘಟ್ಟ ರಸ್ತೆತಯಲ್ಲಿ ಪ್ರತಿದಿನ ಸಂಚರಿಸುವ ಸಾವಿರಾರು ಮಂದಿ ರಸ್ತೆಯಲ್ಲಿ ಜೀವಭಯದಿಂದ ಪರದಾಡುವಂತಾಗಿದೆ. ಜನಪ್ರತಿನಿಧಿ, ಅಧಿಕಾರಿಗಳ ಸ್ವಾರ್ಥ ಸಾಧನೆಗೆ ಜನತೆ ಹಿಡಿಶಾಪ ಹಾಕುತ್ತಲೇ ಇದ್ದಾರೆ. ದಬ್ಬೇಘಟ್ಟ ರಸ್ತೆ ಅಗಲೀಕರಣ ಕಾರ್ಯ ಕಾಮಗಾರಿ ಬೇಗನೆ ಆಗುವಂತೆ ಮಾಡಿ, ಜನರು ನಿರ್ಭೀತಿಯಿಂದ ಸಂಚರಿಸುವಂತೆ ಮಾಡಬೇಕಿದೆ ಎಂಬುದು ನಾಗರೀಕರ ಆಗ್ರಹವಾಗಿದೆ.

ವರದಿ: ಗಿರೀಶ್ ಕೆ ಭಟ್, ತುರುವೇಕೆರೆ

Please follow and like us:
0
https://kannadadalli.com/wp-content/uploads/2019/02/IMG-20190212-WA0003-384x683.jpghttps://kannadadalli.com/wp-content/uploads/2019/02/IMG-20190212-WA0003-150x100.jpgKannadadalli Editorಸುದ್ದಿತುರುವೇಕೆರೆ: ತಾಲ್ಲೂಕು ಕೇಂದ್ರವಾದ ತುರುವೇಕೆರೆ ಪಟ್ಟಣದಲ್ಲಿ ಎಲ್ಲಾ ರೀತಿಯ ಸೌಕರ್ಯಗಳಿದ್ದರೂ ಸಹ ಸಂಚಾರ ವ್ಯವಸ್ಥೆ ಮಾತ್ರ ಇನ್ನಿಲ್ಲದಂತೆ ಹದಗೆಟ್ಟಿದೆ. ಪಟ್ಟಣದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ವಾಹನಗಳಿಂದ ಪಾದಚಾರಿಗಳು, ವಾಹನ ಸಂಚಾರರು ಜೀವಭಯದಿಂದ ಪಟ್ಟಣದಲ್ಲಿ ಸಂಚರಿಸುವಂತಾಗಿದೆ. ಸಂಚಾರ ವ್ಯವಸ್ಥೆಯಲ್ಲಿ ಕಾನೂನು ಭಾರಿ ಪ್ರಮಾಣದಲ್ಲಿ ಉಲ್ಲಂಘನೆಯಾಗುತ್ತಿದ್ದರೂ ಕೇಳುವವರಿಲ್ಲದಂತಾಗಿದೆ. ವರ್ತಕರ ಸ್ವಹಿತಾಸಕ್ತಿ, ಜನಪ್ರತಿನಿಧಿಗ, ಅಧಿಕಾರಿಗಳ ನಿರಾಸಕ್ತಿ, ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳ ನಡುವೆ ಪಟ್ಟಣದ ಜನತೆಯ ಜೀವಕ್ಕೆ ರಕ್ಷಣೆಯಿಲ್ಲದಂತಾಗಿದೆ. ಪಟ್ಟಣದ ಜನನಿಬಿಡ ರಸ್ತೆಯಾದ ದಬ್ಬೇಘಟ್ಟ...ಕನ್ನಡಿಗರ ವೆಬ್​ ಚಾನೆಲ್​